ಹನುಮಂತೇಗೌಡ ಅಥವಾ ಹನುಮಂತಗೌಡ (ಆಂಗ್ಲ: - ೯ ನವೆಂಬರ್ ೧೯೬೨), ಕನ್ನಡದಲ್ಲಿ ನಟಿಸುವ ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ನಟ. ಪೋಷಕ ಪಾತ್ರಗಳಿಗೆ ಹೆಸರಾದವರು. ಜಾಲಿಡೇಸ್ (೨೦೦೯), ನಮ್ಮ ಪ್ರೀತಿಯ ರಾಮು (೨೦೦೩), ಕಿರಿಕ್ ಪಾರ್ಟಿ (೨೦೧೬), ಹೆಬ್ಬೆಟ್ ರಾಮಕ್ಕ (೨೦೧೮) ಮತ್ತು ಜೆಂಟಲ್ ಮ್ಯಾನ್ (೨೦೨೦) ಅವರು ನಟಿಸಿದ ಕೆಲವು ಪ್ರಮುಖ ಚಿತ್ರಗಳು. == ವೈಯಕ್ತಿಕ ಜೀವನ == ಹನುಮಂತೇಗೌಡರು ಚಿಕ್ಕನಾಯಕನಹಳ್ಳಿಯ ಕೃಷಿಕ ಕುಟುಂಬವೊಂದರಲ್ಲಿ ಹುಟ್ಟಿದರು. ತೋವಿನಕೆರೆಯಲ್ಲಿ ಶಾಲಾಶಿಕ್ಷಣ ಮುಗಿಸಿದ ಅವರು ಪದವಿ ಓದಿಗಾಗಿ ಬೆಂಗಳೂರಿಗೆ ಬಂದರು. ಶಶಿಕಲಾ ಅವರನ್ನು ಮದುವೆಯಾದ ಹನುಮಂತೇಗೌಡರಿಗೆ ಇಬ್ಬರು ಮಕ್ಕಳಿದ್ದಾರೆ. == ನಟನಾವೃತ್ತಿ == ಕಾಲೇಜು ದಿನಗಳಿಂದಲೇ ರಂಗಭೂಮಿಯಲ್ಲಿ ಸಕ್ರಿಯರಾದ ಹನುಮಂತೇಗೌಡರಿಗೆ ಕಿರುತೆರೆಯ ಅವಕಾಶಗಳು ಸಿಕ್ಕವು. ೨೦೦೩ರಲ್ಲಿ ತೆರೆಕಂಡ ನಮ್ಮ ಪ್ರೀತಿಯ ರಾಮು ಅವರು ನಟಿಸಿದ ಮೊದಲ ಚಲನಚಿತ್ರ. ಸುಂಟರಗಾಳಿ, ಜಾಲಿಡೇಸ್, ಕೇರ್ ಆಫ್ ಫುಟ್ಬಾತ್ 2 ಚಿತ್ರಗಳಲ್ಲಿನ ನಟನೆ ಅವರಿಗೆ ಹೆಸರು ತಂದವು. ೨೦೧೬ರಲ್ಲಿ ಬಂದ ಕಿರಿಕ್ ಪಾರ್ಟಿ ಚಿತ್ರದ ಕಾಲೇಜು ಪ್ರಾಂಶುಪಾಲ ‛ತೋಂಟದಾರ್ಯ’ ಪಾತ್ರ ಅಪಾರ ಮೆಚ್ಚುಗೆ ಪಡೆಯಿತು. ಇದೇ ಚಿತ್ರ ತೆಲುಗಿನಲ್ಲಿ ಕಿರಾಕ್ ಪಾರ್ಟಿ ಹೆಸರಿನಲ್ಲಿ ನಿರ್ಮಾಣವಾದಾಗ ಪ್ರಾಂಶುಪಾಲ ಪಾತ್ರವನ್ನು ಇವರೇ ನಿರ್ವಹಿಸುವ ಮೂಲಕ ತೆಲುಗು ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದರು. ರಾಷ್ಟ್ರಪ್ರಶಸ್ತಿ ಪಡೆದ ೨೦೧೮ರ ಕನ್ನಡ ಚಿತ್ರ ಹೆಬ್ಬೆಟ್ ರಾಮಕ್ಕದಲ್ಲಿ ಭ್ರಷ್ಟ ಶಾಸಕನ ಪಾತ್ರವನ್ನು ನಿರ್ವಹಿಸಿದ್ದಾರೆ. ೨೦೨೦ರ ಆಗಸ್ಟ್ ನಲ್ಲಿ, ಖ್ಯಾತ ಕಿರುತೆರೆ ನಿರೂಪಕಿ, ನಟಿ ಅನುಶ್ರೀ ಅವರ ತಂದೆಯೇ ಹನುಮಂತೇಗೌಡ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿತ್ತು. ಅದನ್ನು ನಿರಾಕರಿಸಿದ ಗೌಡರು ಈ ವದಂತಿಯ ವಿರುದ್ಧ ದೂರು ನೀಡಿದ್ದರು. ಇಂದಿಗೂ ಕಿರುತೆರೆ, ರಂಗಭೂಮಿ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಹನುಮಂತೇಗೌಡರು ಸುಮಾರು 40ಕ್ಕೂ ಹೆಚ್ಚಿನ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. == ನಟಿಸಿದ ಚಿತ್ರಗಳು == ನಮ್ಮ ಪ್ರೀತಿಯ ರಾಮು (೨೦೦೩) ಶ್ರೀರಾಮಪುರ ಪೊಲೀಸ್ ಸ್ಟೇಶನ್ (೨೦೦೪) ಸುಂಟರಗಾಳಿ (೨೦೦೫) ಶಾಸ್ತ್ರಿ (೨೦೦೫) ಬೆಳ್ಳಿ ಬೆಟ್ಟ (೨೦೦೬) ಯುವ (೨೦೦೯) ಜಾಲಿಡೇಸ್ (೨೦೦೯) ಪೊರ್ಕಿ (೨೦೧೦) ಮಿ. ಐರಾವತ (೨೦೧೫) ಕಿರಿಕ್ ಪಾರ್ಟಿ (೨೦೧೬) ಕಿರಾಕ್ ಪಾರ್ಟಿ (೨೦೧೮) ಹೆಬ್ಬೆಟ್ ರಾಮಕ್ಕ (೨೦೧೮) ಅರ್ಜುನ್ ಗೌಡ (೨೦೨೦) ಜೆಂಟಲ್ ಮ್ಯಾನ್ (2020) == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ಹನುಮಂತೇಗೌಡ @ ಐ ಎಮ್ ಡಿ ಬಿ